Monday, January 28, 2008

ವಸಂತಪುರದಲ್ಲಿ ತ್ಯಾಗರಾಜರ ಆರಾಧನೆ !


ನಿನ್ನೆ ತ್ಯಾಗರಾಜರ ಆರಾಧನೆ. ಒಂದ್ ರೀತಿಯಲ್ಲಿ ಸಂಗೀತದ ವಿದ್ಯಾರ್ಥಿಗಳ್ಗೆ, Thanksgiving day ಇದ್ಹಾಗೆ. ಕಲಿತ ಒಂದಿಷ್ಟು ವಿದ್ಯೆಯನ್ನ, ಸಂಗೀತದಿಂದ ಪಡೆದ ಆನಂದದ ಅನುಭವವನ್ನ ಗುರುಗಳಿಗೆ ಒಪ್ಪಿಸಿ ಬಂದ್ರೆ ಏನೋ ಒಂದ್ ಸಂತೋಷ, ಸಮಾಧಾನ !

ಭಾನುವಾರ ಬೆಳಗ್ಗೆ ಏಳೋಕ್ಕೆ ಇದಕ್ಕಿಂತ motivation ಇನ್ನೇನ್ ಬೇಕು? ಹೀಗಾದ್ರೂ ಬೇಗ ಏಳ್ತೀನಿ ಅಂತ ಅಮ್ಮಂಗಂತೂ ತುಂಬಾ ಖುಶಿ. ಸರಿ. ಬೇಗ ಎದ್ದು ready ಆಗಿ ನನ್ನ ಗುರುಗಳು ಹಾಗೂ ಗೆಳತಿಯರೊಂದಿಗೆ ವಸಂತಪುರಕ್ಕೆ ಹೊರಟೆ. ಇತ್ತೀಚಿನ ವರ್ಷಗಳ್ ತನಕ ಬೆಂಗಳೂರಿನ outskirts ನಲ್ಲಿರೋ ಯಾವುದೋ ಒಂದು ಅಪರಿಚಿತ ಚಿಕ್ಕ ಹಳ್ಳಿ ವಸಂತಪುರ. ಆದ್ರೆ ಈಗ 'ಇಲ್ಲೆ ಬನಶಂಕರಿ ಹತ್ರ' ಅನ್ನೋಷ್ಟು ಬೆಂಗಳೂರು ಮಹಾನಗರಿಯ ಭಾಗ. ಆದ್ರೂ ಮಹಾನಗರಿಯ traffic ಆ ಕಡೆ ಹರಿಯೋದು ಅಪರೂಪ. ಬೆಳೀತಾ ಇರೋ ಸಸಿಗಳ ಹಾಗೆ ಈಗೀಗ ಏಳ್ತಾ ಇರೋ ಮನೆಗಳು; ಆಗೊಂದು ಈಗೊಂದು ಅಲೆದಾಡೋ ಬಸ್ಸು. ಪ್ರಶಾಂತವಾದ ಪುಟ್ಟ ಗುಡ್ಡದ ಮೇಲೆ ಊರಿನ ಓಡೆಯ ವಸಂತವಲ್ಲಭರಾಯ. ಪಕ್ದಲ್ಲಿ ಭವಾನಿ ಶಂಕರ. ಇದೇ ಭವಾನಿ ಶಂಕರ ದೇವಸ್ಥಾನದಲ್ಲಿ ಪುರಂದರದಾಸರು ತ್ಯಾಗರಾಜರಿಗೂ ಒಂದು ಪುಟ್ಟ ಗುಡಿ ಇದೆ ಅಂತ ನಮ್ಮಲ್ಲಿ ಅನೇಕರಿಗೆ ಗೊತ್ತಿದ್ಯೋ ಇಲ್ವೋ !

ಆ ದಿನ ಭವಾನಿ ಶಂಕರ ದೇವಸ್ಥಾನದಲ್ಲಿ ಸಂಗೀತಮಯ ವಾತಾವರಣ; ಹಬ್ಬದ ಸಂತಸ. ಹಿರಿಯರು, ಸ್ನೇಹಿತರು, ಪರಿಚಿತರು, ರಸಿಕರು - ಎಲ್ರೂ ಸೇರಿದ್ರು. ಮೊನ್ಮೊನ್ನೆ ಕಲಿತ ಕೃತಿಯನ್ನ ತುಂಬಾ ಉತ್ಸಾಹದಿಂದ ಹಾಡಿದ್ ಪುಟಾಣಿಗಳು ; ಇನ್ ಕೆಲವ್ರು ಘನವಾಗಿ, ಶುದ್ಧವಾಗಿ ಹಾಡಿದ್ ವಿದ್ವಾಂಸರು. ವಯೋಧರ್ಮದಿಂದ voice shake ಆಗ್ತಿದ್ರೂ ಒಂದೊಂದು phraseನಲ್ಲೂ ರಾಗ ಉಕ್ಕಿ ಹರಿಯೋಹಾಗೆ ಹಾಡಿದ ಹಿರಿಯರು; ದೊಡ್ಡ ದೊಡ್ಡ ವಿದ್ವಾಂಸರಿಗೇ ಸವಾಲಾಗಬಹುದಾದಂತ ಪಂಚರತ್ನ ಕೃತಿಗಳನ್ನ ಕೇವಲ ಕೇಳ್ಮೆ ಇಂದಲೇ ಕಲಿತು ಲೀಲಾಜಾಲವಾಗಿ ಹಾಡ್ತಿದ್ದ 'ಮಹಾನುಭಾವರು'; ಕಂಚಿನ ಕಂಠಗಳಲ್ಲಿ ಮೊಳಗ್ತಾ ಇದ್ದ ವೇದ ಘೋಷ - ಎಲ್ಲವನ್ನೂ ಕೇಳಿ ಹೃದಯ ತುಂಬಿ ಬಂತು. ಮನಸ್ಸೂ ಕೂಡಾ ಪ್ರಶ್ನೆಗಳಿಂದ ತುಂಬಿ ಹೋಯ್ತು. ಪಂಚರತ್ನ ಕೃತಿಗಳನ್ನ ಹಾಡ್ತಾ, ಕೇಳ್ತಾ ನನ್ ಮನಸ್ನಲ್ಲಿ ಪ್ರಶ್ನೆಗಳ, ಕುತೂಹಲಗಳ ಇನ್ನೊಂದು ಲೋಕಾನೇ ಸೃಷ್ಟಿಯಾಗಿತ್ತು. ಇಂತಹ ಆರಾಧನೆಗಳನ್ನ ಆಚರಿಸೋದರ ಮಹತ್ವ ಏನು? ಇದರ ಹಿಂದಿನ ಸದುದ್ದೇಶ congregation-building ಇರಬಹುದಾ? ಒಂದು ಪರಂಪರೆಯ ಉಳಿವು, ಬೆಳವಣಿಗೆಯಲ್ಲಿ ಇಂತಹ community gatheringಗಳ ಪಾತ್ರ ಯೇನು? ಪಂಚರತ್ನ ಕೃತಿಗಳು ಭಜನ ಸಂಪ್ರದಾಯದ extension ಆದದ್ದು ಹೇಗೆ? Classical music 'class' ಗಳಿಗೆ ಮಾತ್ರ ಅನ್ನೋ ವಾದ ಎಷ್ಟು ಸೂಕ್ತ? Classical music ನಲ್ಲಿರೋ 'mass' content ಯೇನು? ಹೀಗೆ ಒಂದ್ ರಾಶಿ questionಗಳು. (next time ಯಾವಾಗ್ಲಾದ್ರು ನನ್ನನ್ನ ಕಾಡ್ತಿರೋ ಈ ಪ್ರಶ್ನೆಗಳನ್ನ ನಿಮ್ ಜೊತೆ discuss ಮಾಡ್ತೀನಿ :))

ಈ ಎಲ್ಲ ಪ್ರಶ್ನೆಗಳ ನಡುವೆಯೆ, ಹೋದ ವಾರ ತಾನೆ ಓದಿದ Devadasi and the Saint ಅನ್ನೋ biography ಯ ನಾಯಕಿ ಬೆಂಗಳೂರು ನಾಗರತ್ನಮ್ಮ ಅವರ ಚಿತ್ರ ಒಂದು ಕ್ಷಣ ಕಣ್ ಮುಂದೆ ಹಾದು ಹೋಯ್ತು. ಆ ಮಹಾನ್ ವ್ಯಕ್ತಿಗೆ ಮನಸೊಳಗೇ ಒಂದು ಸಲಾಮ್ ಹಾಕ್ದೆ !

ಊಟ ಮುಗ್ಸಿ ಹೊರಗೆ ಬಂದಾಗ ನನ್ನ ಗುರುಗಳು "ನಾವು ಮೇಷ್ತ್ರು ಜೊತೆ ಬಂದಾಗ ಇಲ್ಲಿರ್ತಿದ್ವಿ, ಇಲ್ಲಿ ಕಚೇರಿ ಮಾಡ್ತಿದ್ವಿ....ಆಗ ವಸಂತಪುರ ಹಾಗಿತ್ತು....ಆರಾಧನೆ ಹಾಗೆ ನಡೀತಾ ಇತ್ತು"....ಅಂತೆಲ್ಲ ಹಳೆ ಕಥೆಗಳನ್ನ ಹೇಳ್ತಿಧ್ಹಾಗೆ, ಅವರ nostalgia ಗೆ ನನ್ ಮನಸ್ಸು ಸ್ಪಂದಸ್ತಾ ಹೋಯ್ತು...ಕಣ್ಮುಚ್ಚಿ ಅವ್ರು ಹೇಳ್ತಿದ್ ಕಥೆಗಳನ್ನೆಲ್ಲ ನನ್ನ ಕಲ್ಪನೆಯಲ್ಲಿ recreate ಮಾಡ್ಕೊಳ್ತಾ ಹೋದೆ !

ಪಕ್ಕದ ಗುಡಿಯಲ್ಲಿ, ವರ್ಷವಿಡೀ ಇದೆ ದಿವಸಕ್ಕಾಗಿ ಕಾಯ್ತಿದ್ನೇನೊ ಅನ್ನೋ ಹಾಗೆ ಮುಗುಳ್ನಗುತ್ತಾ ನಿಂತಿದ್ದ ಆ ದಿವ್ಯ ಸುಂದರ ವಸಂತವಲ್ಲಭರಾಯ. ಈ ಕಡೆ, ತನಗಾಗಿ ಯಾವ್ದೇ ಅಲಂಕಾರವನ್ನ, attentionನ್ನ ಕೇಳ್ದೆ, ತೀರ unassuming ಆಗಿ ನಾದೋಪಾಸನೆ ಯಲ್ಲಿ ಮುಳುಗಿ ಹೋಗಿದ್ದ ಭವಾನಿ ಶಂಕರ ! ಅವರಿಬ್ಬರಿಗೂ ಕೈ ಮುಗಿದು ಮನೆ ಕಡೆ ಹೊರಟ್ವಿ. ಅಲೆಮಾರಿ ಬಸ್ಸು ಮಹಾನಗರಿಯ traffic ಸಾಗರವನ್ನ ಸೇರದ್ರೂ ಮನಸ್ನಲ್ಲಿ ಮಾತ್ರ ಆ ವೇದ ಘೋಷಗಳು, ಪಂಚರತ್ನಗಳು ನಡೀತಾನೇ ಇತ್ತು ! :